ಮುನ್ಷಿ, ಕನ್ನ್ಹೈಯಲಾಲ್ ಮನೆಕ್‍ಲಾಲ್
 	1887-1971. ವಿದ್ವಾಂಸ. ರಾಜಕಾರಣಿ, ವಕೀಲ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಮತ್ತು ಭಾರತೀಯ ವಿದ್ಯಾಭವನದ ಸ್ಥಾಪಕ, ಕುಲಪತಿ. ಕೆ.ಎಂ. ಮುನ್ಷಿಯವರು ಗುಜರಾತಿನ ಬರೂಚ್‍ನಲ್ಲಿ 1887ರ ಡಿಸೆಂಬರ್ 30ರಂದು ಜನಿಸಿದರು. ಬಡೋದೆಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ವಕೀಲರಾದರು (1913). ಭುಲಾಭಾಯಿ ದೇಸಾಯಿಯವರ ಕೈಕೆಳಗೆ ವಕೀಲ ವೃತ್ತಿಯನ್ನು ಇವರು ಆರಂಭಿಸಿದ ಸ್ವಲ್ಪಕಾಲದಲ್ಲೇ ಒಂದನೆಯ ಮಹಾಯುದ್ಧ ಆರಂಭವಾಯಿತು. ಯುದ್ಧ ಮುಗಿಯುವ ವೇಳೆಗೆ ಇವರು ತಮ್ಮ ವೃತ್ತಿಯಲ್ಲಿ ಪ್ರಸಿದ್ಧರಾದರು. ಹಿಂದೂ ಕಾನೂನಿನಲ್ಲಿ ಮುನ್ಷಿಯವರು ವಿಶೇಷ ಜ್ಞಾನ ಪಡೆದಿದ್ದರಲ್ಲದೆ ಕಾನೂನಿನ ಇತರ ಕ್ಷೇತ್ರಗಳಲ್ಲೂ ಪರಿಣಿತರಾಗಿದ್ದರು. ಇವರು ರಚಿಸಿದ ಹಲವು ಪ್ರತಿವಾದಗಳು ಅತ್ಯಂತ ತರ್ಕಬದ್ಧವಾದ ಸಾಹಿತ್ಯಕೃತಿಗಳೆಂದು ಹೆಸರಾಗಿವೆ. ಯಾವುದೇ ವ್ಯಾಜ್ಯದ ಯಾವುದೇ ಪಕ್ಷದ ಯಾವುದೇ ಪಕ್ಷದ ವಕೀಲಿಯನ್ನಾದರೂ ಇವರು ಅತ್ಯಂತ ಸಮರ್ಥವಾಗಿ ನಿರ್ವಹಿಸಬಲ್ಲವರಾಗಿದ್ದರು. ಎದುರು ಪಕ್ಷದ ವಕೀಲರೊಂದಿಗೆ ಹಾಗೂ ನ್ಯಾಯಮೂರ್ತಿಗಳೊಂದಿಗೆ ಇವರು ನಡೆಸುತ್ತಿದ್ದ ಸಂವಾದಗಳು ರಸಭರಿತವಾದ ಚತುರೋಕ್ತಿಗಳು ಎನಿಸಿದ್ದವು.
ಮುನ್ಷಿಯವರು ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಹಲವಾರು ಬಾರಿ ಸೆರೆಮನೆ ಶಿಕ್ಷೆ ಅನುಭವಿಸಿದರು. 1937ರಲ್ಲಿ ಭಾರತದ ಹಲವು ಪ್ರಾಂತ್ಯಗಳಲ್ಲಿ ವಿಧಾನಸಭೆಗಳಿಗೆ ಕಾಂಗ್ರೆಸ್ ಸ್ಪರ್ಧಿಸಿದಾಗ ಮುನ್ಷಿಯವರು ಅಂದಿನ ಮುಂಬಯಿ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾದರಲ್ಲದೆ ಅಲ್ಲಿಯ ಕಾಂಗ್ರೆಸ್ ಸರ್ಕಾರದಲ್ಲಿ ಗೃಹಮಂತ್ರಿಯಾದರು. 1940ರಲ್ಲಿ ತಮ್ಮ ಪಕ್ಷದ ಇತರ ಮಂತ್ರಿಗಳೊಂದಿಗೆ ಇವರೂ ರಾಜೀನಾಮೆ ನೀಡಿ ಹೊರಬಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಇವರು ದೇಶದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಗಮನಾರ್ಹವಾದ ಕೆಲಸ ಮಾಡಿದರು. ಭಾಷೆ ಮುಂತಾದ ಹಲವು ವಿಚಾರಗಳಲ್ಲಿ ಉತ್ತರ ದಕ್ಷಿಣ ಭಾರತದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಮುನ್ಷಿಯವರು ಸಾಮರಸ್ಯ ಕುದುರಿಸಲು ಯತ್ನಿಸಿದರು. ಕೇಂದ್ರ ಪ್ರಾಬಲ್ಯವುಳ್ಳ ಒಕ್ಕೂಟದ ರಚನೆಗಾಗಿ ಇವರು ವಾದಿಸಿದರೆಂದು ಹೇಳಲಾಗಿದೆ. ರಾಷ್ಟ್ರಪತಿಯನ್ನು ಲೋಕಸಭೆಯಿಂದ ಮಾತ್ರ ಆಯ್ಕೆಮಾಡಲಾಗದೆಂದು ಅವರ ಚುನಾವಣೆಯ ಕ್ಷೇತ್ರ ಇನ್ನೂ ವ್ಯಾಪಕವಾಗಿರಬೇಕೆಂದು ವಾದಿಸಿದವರ ಪೈಕಿ ಮುನ್ಷಿಯವರೂ ಒಬ್ಬರು.

	ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದ ದಿನಗಳಲ್ಲಿ ಹೈದರಾಬಾದ್ ಸಂಸ್ಥಾನವನ್ನು ಒಕ್ಕೂಟದಲ್ಲಿ ವಿಲೀನಗೊಳಿಸಲು ಮುನ್ಷಿಯವರು ವಿಶೇಷವಾಗಿ ಶ್ರಮಿಸಿದರು. ಆ ಸಂಸ್ಥಾನದ ಮೇಲೆ ನಡೆಸಲಾದ ಪೋಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ಇವರು ಹೈದರಾಬಾದಿನಲ್ಲಿ ಭಾರತ ಸರ್ಕಾರದ ಮಹಾಪ್ರತಿನಿಧಿ ಆಗಿದ್ದರು. ನಿಜಾಮರು ಹೈದರಾಬಾದನ್ನು ಭಾರತದಲ್ಲಿ ವಿಲೀನಗೊಳಿಸುವಂತೆ ಮಾಡುವಲ್ಲಿ ಮುನ್ಷಿಯವರ ಪಾತ್ರ ಇತ್ತು. 1950ರಲ್ಲಿ ಇವರು ಕೇಂದ್ರ ಸಂಪುಟದಲ್ಲಿ ಕೃಷಿ ಮತ್ತು ಆಹಾರ ಮಂತ್ರಿಯಾದರು. ಮರಗಳನ್ನು ಬೆಳೆಸುವ ಮಹತ್ತ್ವವನ್ನು ಇವರು ಅರಿತುಕೊಂಡಿದ್ದರು. ಇವರು ಆರಂಭಿಸಿದ ವನಮಹೋತ್ಸವ ಆಗ ಬಹಳಷ್ಟು ಅವಜ್ಞೆಗೆ ಗುರಿಯಾಗಿದ್ದರೂ ಇಂದು ಅದೊಂದು ವ್ಯಾಪಕ ಚಳವಳಿಯಾಗಿ ಪರಿಣಮಿಸಿದೆ. ಅನಂತರ ಇವರು ಉತ್ತರ ಪ್ರದೇಶದ ರಾಜ್ಯಪಾಲರಾಗಿದ್ದರು.

	ಮುನ್ಷಿಯವರು ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಆಧುನಿಕ ಗುಜರಾತಿ ಸಾಹಿತ್ಯ ಸಂಪದ್ಯುಕ್ತವಾಗುವಂತೆ ಮಾಡಿದ ಪ್ರಮುಖರಲ್ಲಿ ಮುನ್ಷಿಯವರೂ ಒಬ್ಬರು. 1920ರ ದಶಕದಲ್ಲಿ ಇವರು ಸಂಪಾದಿಸುತ್ತಿದ್ದ 'ಗುಜರಾತ್ ಎಂಬ ಪತ್ರಿಕೆ ಅತ್ಯುತ್ತಮ ಸಾಹಿತ್ಯ ಸತ್ತ್ವವುಳ್ಳದ್ದೆಂದು ಪರಿಗಣಿತವಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಂತ್ರಿಮಂಡಲ ರಾಜೀನಾಮೆ ನೀಡಿದಾಗ ಇವರು ಇನ್ನೊಂದು ಪತ್ರಿಕೆ ನಡೆಸುತ್ತಿದ್ದರು. ಅದರ ಹೆಸರು ಸೋಷಿಯಲ್ ವೆಲ್‍ಫೇರ್. ಮುನ್ಷಿಯವರು ನಾಲ್ಕು ಸಾಮಾಜಿಕ ಕಾದಂಬರಿಗಳನ್ನೂ ಒಂದು ಬೃಹತ್ 'ಕಥೆಯನ್ನೂ ಏಳು ಐತಿಹಾಸಿಕ ರಮ್ಯಕಾದಂಬರಿಗಳನ್ನೂ ಒಂದು ಕಥಾಸಂಕಲನವನ್ನೂ ಎರಡು ಜೀವನಚರಿತ್ರೆಗಳನ್ನೂ ಹತ್ತು ಸಾಮಾಜಿಕ ನಾಟಕಗಳನ್ನೂ ಹನ್ನೊಂದು ಐತಿಹಾಸಿಕ ನಾಟಕಗಳನ್ನೂ ಗುಜರಾತಿಯಲ್ಲಿ ಬರೆದರು. ಇಂಗ್ಲಿಷಿನಲ್ಲಿ ಇವರು ಬರೆದ ಕೃತಿಗಳು ಇಪ್ಪತ್ತೊಂಬತ್ತು. ಅಲ್ಲದೆ ಇವರು ತಮ್ಮ ಆತ್ಮಕಥೆಯನ್ನೂ ರಚಿಸಿದರು.

	ಮುನ್ಷಿಯವರಿಗೆ ಭಾರತೀಯ ಸಂಸ್ಕøತಿಯಲ್ಲೂ ಸಂಸ್ಕøತಭಾಷೆಯಲ್ಲೂ ಬಹಳ ಅಭಿಮಾನವಿತ್ತು. ಭಾರತೀಯ ಸಂಸ್ಕøತಿಯ ಪ್ರಚಾರ ಹಾಗೂ ಅಭ್ಯಾಸಕ್ಕಾಗಿ ಮುನ್ಷಿಯವರು 1938ರ ನವೆಂಬರ್‍ನಲ್ಲಿ ಭಾರತೀಯ ವಿದ್ಯಾಭವನ ಎಂದ ಸಂಸ್ಥೆಯನ್ನು ಸ್ಥಾಪಿಸಿದರು. ಸಣ್ಣದಾಗಿ ಆರಂಭವಾದ ಈ ಸಂಸ್ಥೆ ಕ್ರಮೇಣ ಬೆಳೆಯಿತು. ಇಂದು ಭಾರತದಲ್ಲೂ ಇತರ ದೇಶಗಳಲ್ಲೂ ಇದರ ಒಟ್ಟು ಇಪ್ಪತ್ತೈದು ಅಂಗಸಂಸ್ಥೆಗಳೂ ವಿಭಾಗಗಳೂ ಕೇಂದ್ರಗಳೂ ಸ್ಥಾಪಿತವಾಗಿವೆ. ಇದು ಒಂಬೈನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಹನ್ನೊಂದು ಬೃಹತ್ ಸಂಪುಟಗಳಲ್ಲಿ ಪ್ರಕಟವಾಗಿರುವ 'ಭಾರತೀಯ ಇತಿಹಾಸ ಮತ್ತು ಸಂಸ್ಕøತಿ' ಎಂಬುದು ಮಹತ್ತ್ವದ ಕೃತಿ. 'ಭವನ್ಸ್ ಜರ್ನಲ್ ಎಂಬ ಪತ್ರಿಕೆಯೊಂದನ್ನು ಇದು ಇಂಗ್ಲಿಷ್‍ನಲ್ಲಿ ಪ್ರಕಟಿಸುತ್ತಿದೆ. ವಿದ್ಯಾಭವನ 550 ಕೇಂದ್ರಗಳಲ್ಲಿ ವರ್ಷವರ್ಷವೂ ನಡೆಸುವ ಸಂಸ್ಕøತ ಪರೀಕ್ಷೆಗಳಿಗೆ 60,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂರುತ್ತಾರೆ.

	ಮುನ್ಷಿಯವರ ವೈವಾಹಿಕ ಜೀವನವೂ ಅಸಾಧಾರಣವಾಗಿತ್ತು. ಇವರ ಮೊದಲ ಪತ್ನಿ ಜೀವಂತವಾಗಿರುವಾಗಲೇ ಇವರು ಇನ್ನೊಬ್ಬ ವಿವಾಹಿತ ಮಹಿಳೆಯನ್ನು ಪ್ರೀತಿಸಿದರು. ಆಗ ಅದು ಪ್ರಚಂಡವಾದ ಬಿರುಗಾಳಿಯನ್ನೆಬ್ಬಿಸಿತು. ಮೊದಲನೆ ಪತ್ನಿ ತೀರಿಕೊಂಡಾಗ ಇವರು ತಾವು ಪ್ರೀತಿಸಿದ್ದ ಲೀಲಾವತಿಯವರನ್ನು ಮದುವೆಯಾದರು. ಲೀಲಾವತಿಯವರು ಮುನ್ಷಿಯವರ ಎಲ್ಲ ಕಾರ್ಯಗಳಲ್ಲೂ ಅವರೊಂದಿಗೆ ನಿಂತು ಸಹಕಾರ ನೀಡುತ್ತಿದ್ದರು. ಕೆ. ಎಂ. ಮುನ್ಷಿಯವರು 1971ರ ಫೆಬ್ರುವರಿ 8ರಂದು ನಿಧನಹೊಂದಿದರು.	
 
        (ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ